shabd-logo

ಚಕ್ರವ್ಯೂಹ ಮುನ್ನುಡಿ.....

23 February 2023

7 ವೀಕ್ಷಿಸಲಾಗಿದೆ 7


ಜೀವನ ಎನ್ನುವ ಯುದ್ಧರಂಗದಲ್ಲಿ, ಅನೇಕ ಮಂದಿ ಎದುರಾಳಿಗಳು ನಮಗೆ ಸಂಬಂಧಪಟ್ಟವರೇ, ಎಲ್ಲರೂ ನಮ್ಮವರೇ ಅನ್ನುವ ರೀತಿ ಇದ್ದರೂ, ನಮಗೇ ಗೊತ್ತಿಲ್ಲದ ರೀತಿ ನಮ್ಮ ಹಿಂದೆ ಸಂಚಿನ ಬಲೆಯನ್ನೇ ಹೆಣೆದುಬಿಡುತ್ತಾರೆ. ಅವರ ನಾಟಕದ ಒಡನಾಟದಲ್ಲಿ ಯಾವ ಕ್ಷಣ ಆ ಬಲೆಗೆ ಅರಿಯದೆ ಬೀಳ್ತಿವೊ ಗೊತ್ತಿಲ್ಲ! ಅಥವಾ ಬಲೆ ಬೀಸಿದವರೇ ಆ ಬಲೆಗೆ ಬೀಳ್ತಾರೋ, ಅದೂ ಗೊತ್ತಿಲ್ಲ! ಎಲ್ಲಾ ವಿಧಿ ಆಡಿಸುವ ಧರ್ಮಪರೀಕ್ಷೆ!

ಆ ಇತಿಹಾಸದ ಪುಟಗಳಲ್ಲಿ ಹುದುಗಿಹೋದ ಆ ಧರ್ಮ ಯುದ್ಧಕ್ಕೆ ಅಂದು ಕ್ಷೇತ್ರವೇ ಸಿದ್ಧವಾಗಿತ್ತು. ಅದನ್ನು ಕುರುಕ್ಷೇತ್ರ ಅಂತ ಕರೆದ್ರು, ಪಕ್ಷಬೇಧವಿಲ್ಲದ ಭೀಷ್ಮರೂ ಯುದ್ದದಲ್ಲಿ ಭಾಗವಹಿಸಲೇಬೇಕಾಯ್ತು. ಅದೂ ಧರ್ಮದ ವಿರುದ್ಧವಾಗಿ, ವಿದ್ಯೆ ಹೇಳಿಕೊಟ್ಟ ಗುರು ಸಹ ಜೊತೆಗೆ ಹೆಗಲಾದರು, ಅದೂ ಅಧರ್ಮದ ಪಕ್ಷದಲ್ಲಿ; ದಾನದಲ್ಲೇ ಶೇಷ್ಠತೆಯನ್ನು ಮೆರೆದಂತಹ ವೀರ ದಾನಶೂರ ಕರ್ಣನೇ ತನ್ನ ತಮ್ಮಂದಿರ ವಿರುದ್ಧವೇ ಯುದ್ಧ ಮಾಡಬೇಕಾದಂತಹ ಪರಿಸ್ಥಿತಿ ಎದುರಾಯ್ತು. ಎಲ್ಲರೂ ಹೃದಯದಿಂದ ಒಳ್ಳೆಯವರೇ ಆದರೆ ಬೆನ್ನೆಲುಬಾಗಿ ನಿಂತದ್ದು ಮಾತ್ರ ಅಧರ್ಮಕ್ಕೆ!

ಆ ಯುದ್ಧರಂಗದಲ್ಲಿ ವೀರಮರಣವನ್ನಪ್ಪಿ ಮೆರೆದವನೊಬ್ಬ ಇನ್ನೂ ಬಾಲಕ. ಅವನೇ ಅಭಿಮನ್ಯು! ವಿರೋಧಿಗಳ ಸಂಚಿಗೆ ಬಲಿಯಾದವ ಯುದ್ಧ ಸಂದರ್ಭದಲ್ಲಿ ವೀರಾಧಿವೀರ ಎನಿಸಿಕೊಂಡವರ ಕಣ್ಣಲ್ಲಿ ಭಯ ಹುಟ್ಟಿಸಿದಾತ. ರುದ್ರನಂತೆ ವಿರೋಧಿಗಳ ಎದೆ ಮೇಲೆ ನಾಟ್ಯವಾಡಿದಾತ. ರಣಚಂಡಿಗೆ ವೈರಿಗಳ ರಕ್ತವ ಅರ್ಪಿಸಿದ ಅಸಮಾನ್ಯ ಶೂರ, ಆ ಹದಿನಾರರ ಬಾಲ. ಬದುಕು ಇಷ್ಟೇ ಎನ್ನುವವರ ಮಧ್ಯದಲ್ಲಿ ಇಷ್ಟರಲ್ಲಿ ಎಷ್ಟೆಲ್ಲಾ ಸಾಧಿಸಬಹುದೆಂದು ತೋರಿಸಿದಾತ. ವೀರಾಗ್ರಣಿ ಪಾರ್ಥನ ಮಗ ಪಾರ್ಥಿಯಾತ.

ರಥದ ಹಿಂದೆ ನಿಂತು ಬಿಲ್ಲನ್ನು ಕತ್ತರಿಸಿದ್ದ ಕರ್ಣ. ಆದರೂ ಎದೆಗುಂದಲಿಲ್ಲ ಕತ್ತಿಯನ್ನು ಹಿಡಿದು ಹೋರಾಡುವೆ! ಎಂದು ಮುಂದಾದ, ದುಶ್ಯಾಸನ ಬಂದು ಕತ್ತಿಯನ್ನು ಕಸಿದುಕೊಂಡು ಮೋಸದಿಂದ ಹಲ್ಲೆಮಾಡಿದ್ದ. ದೇಹದಲೆಲ್ಲಾ ಗಾಯ! ರಕ್ತ ಸೋರುತ್ತಿದ್ದರೂ ಹೋರಾಟವನ್ನು ನಿಲ್ಲಿಸಲಿಲ್ಲ.

ಕೈಗೆ ರಥಚಕ್ರ ಸಿಕ್ಕಿತ್ತು. ಅದನ್ನು ಹಿಡಿದು ಹೋರಾಟಕ್ಕೆ ಮುಂದೆ ನಿಂತ ಇವನ ಹೋರಾಟದ ಪರಿಯನ್ನು ನೋಡಿ ಮಹಾಗುರು ದ್ರೋಣಾಚಾರ್ಯರು ಕಣ್ಣಲ್ಲಿ ಕಣ್ಣೀರು ಜಿನುಗುತ್ತಿತ್ತು. ಮೋಸದ ಯುದ್ದ ಮಾಡುತ್ತಿರುವವರ ಕಣ್ಣಲ್ಲಿ ಪಶ್ಚಾತ್ತಾಪದ ನೀರು.

ಆ ಪರಿಯ ಕದನ ಕೌಶಲ್ಯವನ್ನು ತೋರಿದಂತಹ ವೀರ ಅಭಿಮನ್ಯು ರಣರಂಗದಲ್ಲಿ ಕೊನೆಯುಸಿರೆಳೆದ ಕಥೆ ಕೇವಲ ಆರಂಭವಷ್ಟೇ...

ಮೈನವಿರೇಳುವಂತೆ ವೀರೋತ್ಸಾಹ ತುಂಬಿ ಕೊನೆಗೆ ಕಣ್ಣಂಚಲಿ ನೀರನ್ನು ತರುತ್ತೆ ಅಭಿಮನ್ಯುವಿನ ಕಥೆ.

ಇದು ಕೇವಲ ಪುಸ್ತಕ ವೊಂದರ ಕಲ್ಪನೆ ಅಲ್ಲ, ನಮ್ಮೆಲ್ಲರ ನಿತ್ಯಬದುಕಿನ ಕಥೆ. ಪ್ರತಿಯೊಬ್ಬನು ಅಲ್ಲಿ ಪಾತ್ರವಷ್ಟೇ, ಒಬ್ಬ ಭೀಮನಾಗುತ್ತಾನೆ, ಒಬ್ಬ ಅರ್ಜುನನಾಗುತ್ತಾನೆ. ಎಲ್ಲಿ ಶಕುನಿಗಳು ಇರ್ತಾರೋ ಅಲ್ಲಿ ಧರ್ಮರಾಯನೂ ಇರುತ್ತಾನೆ.

ಯಾವ ಪಾತ್ರ ಬೇಕು! ಅಂತ ನಾವೇ ನಿರ್ಧರಿಸಿಕೊಳ್ಳಬೇಕು. ನನ್ ಕಥೆಯಲ್ಲಿ ಸಹ ಒಬ್ಬ ನಾಯಕ ಇದ್ದಾನೆ. ನನ್ನ ಪ್ರಕಾರ ಅವನು ಅಭಿಮನ್ಯು. ನಿಮ್ಮ ಪ್ರಕಾರ ಅವನು ಬೇರೆ ಪಾತ್ರ ವಾಗಿರಬಹುದು. ಆ ಕಥೆಯ ಪಾತ್ರ ಯಾವ ರೀತಿ ತನ್ನ ಬದುಕಿನ ಚಿತ್ರಣವನ್ನು ಕಟ್ಟಿಕೊಂಡಿದ್ದಾನೆ ಎಂಬುದು ಇಷ್ಟ ಆದ್ರೆ ಒಂದೆರಡು ಒಳ್ಳೆ ಮಾತಿನಿಂದ ತಿಳಿಸಿ, ಚೆನ್ನಾಗಿಲ್ಲ ಅಂದ್ರೆ ಏನಾದರೂ ತಪ್ಪಿದ್ದರೆ ಸಹ ತಿಳಿಸಿ ಅಲ್ಲಾ! ಸರಿ ಮಾಡ್ತೀನಿ. ಈ ನಿಮ್ಮ ಬರಹಗಾತಿಯ ಮೇಲೆ ಪ್ರೀತಿ ಇರಲಿ, ಇನ್ನಷ್ಟು ಒಳ್ಳೆಯ ಕಥೆಯನ್ನು ತರುವ ಪ್ರಯತ್ನ ಮಾಡಿದ್ದೇನೆ.

-✍ಲೇಖನಿ

Lekani ಅವರಿಂದ ಇನ್ನಷ್ಟು ಪುಸ್ತಕಗಳು

ಪುಸ್ತಕವನ್ನು ಓದಿ